ಬೆಂಗಳೂರು: ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿದ್ದ 74 ವರ್ಷದ ವ್ಯಕ್ತಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿ, ಮೆಡಿಕವರ್ ಆಸ್ಪತ್ರೆಯ ಯೂರಾಲಜಿ ವಿಭಾಗದ ತಜ್ಞರು ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ರೋಬೋಟಿಕ್ ರ್ಯಾಡಿಕಲ್ ಪ್ರಾಸ್ಟೇಟ್ಕ್ಟಮಿ (Robotic Radical Prostatectomy) ಶಸ್ತ್ರಚಿಕಿತ್ಸೆ ನಡೆಸಿ ಹೊಸ ಜೀವನ ನೀಡಿದ್ದಾರೆ.
ರೋಗಿಯು ಕಳೆದ ಒಂದು ತಿಂಗಳಿನಿಂದ ಮೂತ್ರ ವಿಸರ್ಜನೆ ತೊಂದರೆಯಿಂದ ಬಳಲುತ್ತಿದ್ದು, ತಪಾಸಣೆಯಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದಾಗಿ ದೃಢಪಟ್ಟಿತ್ತು. ನಂತರ ಆಸ್ಪತ್ರೆಯ ಯೂರಾಲಜಿ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಪ್ರಮೋದ್ ಎಸ್. ಅವರ ನೇತೃತ್ವದಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯನ್ನು ತಾತ್ಕಾಲಿಕವಾಗಿ ತೀವ್ರ ನಿಗಾ ಘಟಕದಲ್ಲಿ (ICU) ಮೇಲ್ವಿಚಾರಣೆಯಲ್ಲಿ ಇರಿಸಿ, ಅಗತ್ಯ ಚಿಕಿತ್ಸೆ ನೀಡಲಾಯಿತು. ಬಳಿಕ ಅವರ ಆರೋಗ್ಯ ಸ್ಥಿತಿ ಸ್ಥಿರಗೊಂಡ ಹಿನ್ನೆಲೆಯಲ್ಲಿ ವಾರ್ಡ್ಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಲಾಯಿತು. ರೋಗಿಯು ಉತ್ತಮ ಚೇತರಿಕೆ ಕಂಡು ಆರೋಗ್ಯಕರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ಕುರಿತು ಮಾತನಾಡಿದ ಡಾ. ಪ್ರಮೋದ್ ಎಸ್., ಯೂರಾಲಜಿಸ್ಟ್ ಹಾಗೂ ರೋಬೋಟಿಕ್ ಸರ್ಜನ್, “ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ. ರೋಬೋಟಿಕ್ ಶಸ್ತ್ರಚಿಕಿತ್ಸೆಯಿಂದ ಕಡಿಮೆ ರಕ್ತಸ್ರಾವ, ಕಡಿಮೆ ನೋವು, ವೇಗವಾದ ಚೇತರಿಕೆ ಹಾಗೂ ದೈನಂದಿನ ಜೀವನಕ್ಕೆ ಶೀಘ್ರ ಮರಳುವಂತಹ ಅನೇಕ ಪ್ರಯೋಜನಗಳಿವೆ. 50 ವರ್ಷ ಮೇಲ್ಪಟ್ಟ ಪುರುಷರು ನಿಯಮಿತ ಆರೋಗ್ಯ ತಪಾಸಣೆ ಮತ್ತು PSA ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ,” ಎಂದು ತಿಳಿಸಿದರು.
ತಜ್ಞರ ಪ್ರಕಾರ, ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆ ವೇಳೆ ತೊಂದರೆ, ಮೂತ್ರದ ಹರಿವು ದುರ್ಬಲವಾಗುವುದು, ರಾತ್ರಿ ವೇಳೆ ಹಲವು ಬಾರಿ ಮೂತ್ರ ವಿಸರ್ಜನೆಗೆ ಎದ್ದೇಳುವುದು ಅಥವಾ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವಂತಹ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಯೂರಾಲಜಿಸ್ಟ್ರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ಮೆಡಿಕವರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನ ಹಾಗೂ ಅನುಭವಿ ತಜ್ಞ ವೈದ್ಯರ ನೆರವಿನಿಂದ ಸಂಕೀರ್ಣ ಯೂರಾಲಜಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಒದಗಿಸಲಾಗುತ್ತಿದೆ.






Leave a Reply